ಹಾಸನ:ಶಿರಾಡಿಘಾಟ್‌ನ ಎಡಕುಮೇರಿ-ಕಡಗರಳ್ಳಿ ಮಧ್ಯೆ ಭೂಕುಸಿತದಿಂದಾಗಿ 14 ರೈಲುಗಳ ಸಂಚಾರ ರದ್ದಾಗಿದೆ. ಇನ್ನೊಂದೆಡೆ ಹಳಿ ದುರಸ್ತಿ ಕಾರ್ಯ ಮುಂದುವರಿದಿದ್ದು, ಆ.10ರ ವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಅಸಾಧ್ಯ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಹಳಿಯ ಕೆಳಭಾಗದಲ್ಲಿ ಭಾರಿ ಆಳಕ್ಕೆ ಮಣ್ಣು ಜರಿದು ಹೋಗಿದ್ದು ಹಳಿಗೆ ಅಪಾಯ ಎದುರಾಗಿದೆ. ರೈಲ್ವೆ ಸಿಬ್ಬಂದಿ ಹಗಲಿರುಳು ದುರಸ್ತಿ ಕಾರ್ಯ ಕೈಗೊಂಡಿದ್ದರೂ ಸುರಿಯುತ್ತಿರುವ ಜಡಿಮಳೆ ಅಡ್ಡಿಯಾಗಿದೆ. ಶುಕ್ರವಾರ ಸಂಜೆ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿರುವುದರಿಂದ ಶನಿವಾರ ಹಾಗೂ ಭಾನುವಾರ ಕೂಡ ಹಲವು ರೈಲುಗಳು ಮಾರ್ಗ ಬದಲಾಯಿಸಿ ಸಂಚರಿಸಿವೆ. ಕೆಲವು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ.
ಇದರಿಂದಾಗಿ ಮಂಗಳೂರು-ಬೆಂಗಳೂರುನಡುವೆ ಶಿರಾಡಿ ಮೂಲಕ ರೈಲು ಸಂಚಾರ ಸದ್ಯದ ಮಟ್ಟಿಗೆ ಕಷ್ಟ ಎನಿಸಿದೆ.
50 ಮೀಟರ್ ಆಳಕೆ ಕುಸಿತ: ಆಗಾಗ ಭಾರಿ ಪ್ರಮಾಣದಲ್ಲಿ ಸುರಿಯುವ ಮಳೆಗೆ ಗುಡ್ಡದ ಮಣ್ಣು ಮೆದುವಾಗಿರುವುದೇ ಭೂಕುಸಿತಕ್ಕೆ ಕಾರಣವೆಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹಳಿಯ ತಳಮಟ್ಟವನ್ನು ಗಟ್ಟಿಗೊಳಿಸ ಬೇಕಾದರೆ 20 ವ್ಯಾಗನ್‌ನಷ್ಟು ದೊಡ್ಡ ಬಂಡೆಗಳು ಬೇಕಾಗುತ್ತವೆ. ಪರ್ವತಗಳಿಗೆ ಹಾಕುವಂತಹ ಗೇಬಿಯನ್ ಮೆಷ್ ನ್ನು ಬೇಲಿ ರೀತಿ ಹಾಕಿ, ಬಂಡೆಗಳನ್ನು ತುಂಬುತ್ತಾ ಬರಬೇಕಿದೆ. ಆದರೆ, ಗುಡ್ಡದ ಮಣ್ಣುಮೆತ್ತಗಾಗಿರುವುದನ್ನು ನೋಡಿದರೆ ಈ ಮೆಷ್ ಹಾಕುವುದೂ ಕಷ್ಟವಾಗಿದೆ.
ಆ.10ರ ವರೆಗೆ ರೈಲು ಇಲ್ಲ?:
ಹಗಲು-ರಾತ್ರಿ ನಿರಂತರ ಕೆಲಸ ಮಾಡಿದರೂ ರೈಲು ಮಾರ್ಗವನ್ನು ಸಹಜ ಸ್ಥಿತಿಗೆ ತರುವುದಕ್ಕೆ ಇನ್ನೂ 15 ದಿನ ಬೇಕಾಗಬಹುದು ಎಂದು ಹೇಳಲಾಗಿದೆ. ಈ ಪ್ರದೇಶಕ್ಕೆ ಯಾವುದೇ ರಸ್ತೆ ಸಂಪರ್ಕ ಇಲ್ಲ, ದುರಸ್ತಿಗೆ ಬೇಕಾದ ಎಲ್ಲ ವಸ್ತುಗಳನ್ನು ರೈಲಿನ ವ್ಯಾಗನ್ ಮೂಲಕವೇ ತರಬೇಕಾಗುತ್ತದೆ. ಅದನ್ನು ತಂದರೂ ಕುಸಿತವಾದ ಜಾಗಕ್ಕೆ ತರಲಾಗದು. ಯಾಕೆಂದರೆ ಹಳಿಯ ಕೆಳಭಾಗದಲ್ಲಿ ಸ್ಥಿರತೆ ಇಲ್ಲದೆ ಹಳಿ ಬಾಗುವ, ಹಾನಿಗೊಳ್ಳುವ ಅಪಾಯವೂ ಇದೆ. ಸುಮಾರು 750ಕ್ಕೂ ಅಧಿಕ ಮಂದಿ ಕಾಮಗಾರಿ ನಡೆಸುತ್ತಿದ್ದಾರೆ.