ಹೊಳೆನರಸೀಪುರದಲ್ಲೇ ಪುತ್ರನಿಗೆ ಲೀಡ್ ಕೊಡಿಸಲು ವಿಫಲರಾದ ಎಚ್.ಡಿ.ರೇವಣ್ಣ: ಜೆಡಿಎಸ್ ಶಾಸಕರ ಕ್ಷೇತ್ರಗಳಲ್ಲೇ ಕಾಂಗ್ರೆಸ್ ಗೆ ಭರ್ಜರಿ ಮುನ್ನಡೆ

ಮಂಜು ಬನವಾಸೆ
ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಎನ್.ಡಿ.ಎ.ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸೋಲಿನಲ್ಲಿ ಜೆಡಿಎಸ್ ಶಾಸಕರಿರುವ ಹೊಳೆನರಸೀಪುರ, ಹಾಸನ ಹಾಗೂ ಅರಕಲಗೂಡು ವಿಧಾನಸಭಾ ಕ್ಷೇತ್ರಗಳಲ್ಲಿ‌ ಎದುರಾಳಿಗೆ ದೊರಕಿದ ದೊಡ್ಡ ಮುನ್ನಡೆ ಪ್ರಮುಖ ಪಾತ್ರ ವಹಿಸಿದ್ದು, ಮಾಜಿ ಸಚಿವ ಎಚ್.ಡಿ.ರೇವಣ್ಣ ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ತಮ್ಮ ಪುತ್ರನಿಗೆ ಲೀಡ್ ಕೊಡಿಸಲು ವಿಫಲವಾಗಿದ್ದಾರೆ.

ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ 80193 ಹಾಗೂ ಶ್ರೇಯಸ್ ಪಟೇಲ್ 97800 ಮತ ಗಳಿಸಿದ್ದಾರೆ. ಹೊಳೆನರಸೀಪುರ ಕ್ಷೇತ್ರ ಒಂದರಲ್ಲಿಯೇ ಕಾಂಗ್ರೆಸ್ ಗೆ 17,607 ಮತಗಳ ಮುನ್ನಡೆ ದೊರಕಿದೆ. ಚುನಾವಣೆ ಪ್ರಚಾರದ ಸಾರಥ್ಯ ವಹಿಸಿದ್ದ ಎಚ್.ಡಿ.ರೇವಣ್ಣ, ಹಲವಾರು ಕಾಂಗ್ರೆಸ್ ಮುಖಂಡರನ್ನು ಜೆಡಿಎಸ್ ಗೆ ಸೆಳೆದಿದ್ದರು. ಎಲ್ಲ ಬಗೆಯ ಕಾರ್ಯತಂತ್ರಗಳನ್ನೂ ಅನುಸರಿಸಿದ್ದರು. ಆದರೂ ಅವರು ಅಲ್ಲಿ ಮುನ್ನಡೆ ಕೊಡಿಸುವಲ್ಲಿ ಅವರು ವಿಫಲರಾಗಿದ್ದಾರೆ.

ಪ್ರಾರಂಭದಲ್ಲಿ ಪ್ರಜ್ವಲ್ ಸ್ಪರ್ಧೆಗೆ ಆಕ್ಷೇಪ ವ್ಯಕ್ತಪಡಿಸಿದರೂ ನಂತರದಲ್ಲಿ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಕೊಂಡ ಮಾಜಿ ಸಚಿವ, ಶಾಸಕ ಎ.ಮಂಜು ಅವರ ಕ್ಷೇತ್ರದಲ್ಲಿಯೂ ಜೆಡಿಎಸ್ ದೊಡ್ಡ ಹಿನ್ನಡೆ ಅನುಭವಿಸಿದೆ. ಪ್ರಜ್ವಲ್ 80637 ಹಾಗೂ
ಶ್ರೇಯಸ್ 95065 ಮತ ಪಡೆದಿದ್ದು ಅಲ್ಲಿ ಕಾಂಗ್ರೆಸ್
14448 ಮತಗಳ ಮುನ್ನಡೆ ದಾಖಲಿಸಿದೆ.

ರಾಜ್ಯದ ಕುತೂಹಲ ಸೆಳೆಯುವಂತಹ ಗೆಲುವು ಸಾಧಿಸಿದ್ದ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಸ್ವರೂಪ್ ಪ್ರಕಾಶ್ ಅವರಿಗೂ ತಮ್ಮ ಪಕ್ಷದ ಅಭ್ಯರ್ಥಿಗೆ ಮುನ್ನಡೆ ಕೊಡಿಸಲು ಸಾಧ್ಯವಾಗಿಲ್ಲ. ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್ 68587‌ ಹಾಗೂ
ಶ್ರೇಯಸ್ 88347‌ ಮತಗಳಿಸಿದ್ದಾರೆ. ಇಲ್ಲಿಯೂ 19760 ಮತಗಳ ಮುನ್ನಡೆ ಶ್ರೇಯಸ್ ಪಾಲಾಯಿತು.

ಜೆಡಿಎಸ್ ಗೆ ಭಾರಿ ಮುನ್ನಡೆಯ ನಿರೀಕ್ಷೆಯಿದ್ದ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಭಾರಿ ಹಿನ್ನಡೆಯಾಗದಿದ್ದರೂ ಕೇವಲ 71 ಮತಗಳ ಮುನ್ನಡೆಯಷ್ಟೇ ಪ್ರಜ್ವಲ್ ಗೆ ದೊರಕಿತು. ಆದರೆ ಬಿಜೆಪಿ ಶಾಸಕರಿರುವ ಸಕಲೇಶಪುರ, ಬೇಲೂರು ಕ್ಷೇತ್ರಗಳಲ್ಲಿ 8978 ಅಲ್ಪ ಮುನ್ನಡೆ ದೊರಕಿತು. ಬಿಜೆಪಿ ನಾಯಕರ ಬಣಗಳ ಅಸಹಕಾರದ ನಡುವೆಯೂ ಈ ಮಟ್ಟಿನ ಮತ ಸೆಳೆಯುವಲ್ಲಿ ಜಾತಿ ಲೆಕ್ಕಾಚಾರ, ಮೋದಿ ಪರ ನಿಲುವುಗಳು ಕಾರಣವಾಗಿವೆ.

(ಬಾಕ್ಸ್ ಐಟಂ)
ಕಾಂಗ್ರೆಸ್ ಕ್ಷೇತ್ರಗಳಲ್ಲೇ ಸಿಗಲಿಲ್ಲ ಭಾರಿ ಮುನ್ನಡೆ:
ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಶಾಸಕರಿರುವ ಅರಸೀಕೆರೆ ಹಾಗೂ ಕಡೂರು ಕ್ಷೇತ್ರಗಳಲ್ಲಿ ದೊಡ್ಡ ಮುನ್ನಡೆ ನಿರೀಕ್ಷಿಸಲಾಗಿತ್ತು. ಅದರಲ್ಲಿಯೂ ಕಾಂಗ್ರೆಸ್ ಪ್ರಚಾರ ತಂಡದ ಕ್ಯಾಪ್ಟನ್ ಆಗಿದ್ದ ಕೆ.ಎಂ.ಶಿವಲಿಂಗೇಗೌಡ ಅವರು ತಾವು ಪ್ರತಿನಿಧಿಸುವ ಅರಸೀಕೆರೆ ಕ್ಷೇತ್ರದಲ್ಲಿ 25-30 ಸಾವಿರ ಲೀಡ್ ಕೊಡಿಸಬಹುದು ಎನ್ನುವ ಲೆಕ್ಕಾಚಾರವಿತ್ತು. ಆದರೆ ಅರಸೀಕೆರೆಯಲ್ಲಿ ಕೇವಲ 3093 ಮತಗಳ ಅಲ್ಪ ಮುನ್ನಡೆ ಸಿಕ್ಕಿದೆ. ಕಡೂರು ಕ್ಷೇತ್ರದಲ್ಲಿ 20243 ಮತಗಳ ಹಿನ್ನಡೆಯನ್ನು‌ ಶ್ರೇಯಸ್ ಅನುಭವಿಸಿದ್ದಾರೆ