ದರ್ಶನ ಕರುಣಿಸಿದ ಹಾಸನಾಂಬೆ;ಪೂರ್ವ ಸಿದ್ಧತೆ ಅಚ್ಚುಕಟ್ಟು: ಮೊದಲ ದಿನವೇ ಪ್ರತಿಭಟನೆ ಬಿಸಿ:

ಜಿಲ್ಲಾಡಳಿತಕ್ಕೆ ತಲೆನೋವು: ಪೊಲೀಸರು ಹೈರಾಣು

ಹಾಸನ: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣ ಸುವ ನಗರದಅಧಿದೇವತೆ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ಗುರುವಾರ ಶಾಸ್ತ್ರೋಕ್ತವಾಗಿ ತೆರೆಯಿತು.

ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ
ಮಧ್ಯಾಹ್ನ ೧೨.೨೪ ಕ್ಕೆ ವಿಧ್ಯುಕ್ತವಾಗಿ ಗರ್ಭಗುಡಿ ಬಾಗಿಲು ತೆರೆಯಲಾಯಿತು.

ಮೈಸೂರು ಅರಸು ವಂಶಸ್ಥರು ಬಾಳೆಕಂಬ ಕತ್ತರಿಸುತ್ತಿದ್ದಂತೆಯೇ ಗರ್ಭಗುಡಿ ಬಾಗಿಲು ತೆರೆಯಲಾಯಿತು.
ಈ ವೇಳೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಸೇರಿದಂತೆ ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳು ಹಾಜರಿದ್ದರು. ಈ ವೇಳೆ ಹಾಜರಿದ್ದ ಭಕ್ತರು, ದೇವಿಗೆ ಜಯಗೋಷ ಮೊಳಗಿಸಿ ಕಾಪಾಡು ತಾಯೆ ಎಂದು ಪ್ರಾರ್ಥಿಸಿದರು.

ಮೊದಲ ದಿನದ ದರ್ಶನ ಪಡೆದ ನಂತರ ಮಾತನಾಡಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಇದೊಂದು ಪವಿತ್ರ ಕಾರ್ಯಕ್ರಮ, ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಆಶ್ವೀಜ ಮಾಸದ ಶರದೃತುವಿನಲ್ಲಿ ಹಾಸನಾಂಬೆ ದೇವಿಯ ವಾರ್ಷಿಕ ದರ್ಶನ ಆರಂಭವಾಗಿದೆ. ಮುಂದಿನ ಎರಡು ವಾರಗಳ ಕಾಲ ದೇವಿ ಸಕಲ ಭಕ್ತರಿಗೂ ಶುಭ ಫಲ ಕರುಣ ಸಲಿ ಎಂದು ನುಡಿದರು.
ಮಹಾಲಕ್ಷ್ಮಿ, ಸರಸ್ವತಿ, ಕಾಳಿಯಾಗಿ ತ್ರಿಮೂರ್ತಿ ರೂಪದಲ್ಲಿ ನೆಲೆಸಿರುವ ದೇವಿ,ಮಳೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ರೈತರ ಹಿತಕಾಯಲಿ, ನಾಡಿಗೆ ಮಳೆಯಾಗಿ, ಬದುಕು ಹಸನಾಗಲಿ, ಸಮಸ್ತರಿಗೂ ಒಳಿತಾಗಲಿ ಎಂದು ಆಶಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ದೇವರು, ಸ್ವಾಮೀಜಿ ಅವರ ಆಶೀರ್ವಾದರಿಂದ ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವಕೆ ಎಲ್ಲಾ ರೀತಿಯಲ್ಲೂ ಉತ್ತಮ ಸಿದ್ಧತೆ ಮಾಡಲಾಗಿದೆ. ಎಲ್ಲಾ ಭಕ್ತರು ಶಿಸ್ತು, ಸಂಯಮದಿಂದ ಬಂದು ಹಾಸನಾಂಬೆಯ ದರ್ಶನ ಪಡೆದು ಪುನೀತರಾಗಲಿ ಎಂದರು.

ಹೊಸ ಆಕರ್ಷಣೆ:
ಈ ಬಾರಿಯ ಹಾಸನಾಂಬ ಉತ್ಸವಕೆ ಇಡೀ ನಗರ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ, ಹಾಸನಾಂಬ ಹಾಗೂ ಸಿದ್ದೇಶ್ವರ ದೇವಾಲಯವನ್ನು ವಿಶೇಷ ಹೂ ಹಾಗೂ ಹಣ್ಣು ಮತ್ತು ಆಹಾರ ಧಾನ್ಯಗಳಿಂದ ಅಲಂಕರಿಸಲಾಗಿದೆ.
ಆಕರ್ಷಣೆಯ ಪುಷ್ಪಾಲಂಕಾರ ಗಮನ ಸೆಳೆಯುತ್ತಿದೆ.

ಮೊದಲ ದಿನವೇ ಪ್ರತಿಭಟನೆ
ವಿಪರ‍್ಯಾಸ ಎಂದರೆ ಹಾಸನಾಂಬೆ ದರ್ಶನದ ಮೊದಲ ದಿನವೇ ಸಣ್ಣ ಪುಟ್ಟ ಸಂಘರ್ಷ ನಡೆಯಿತು. ಆರಂಭದ ದಿನ ಸಾರ್ವಜನಿಕ ದರ್ಶನ ಇಲ್ಲ ಎಂದು ಹೇಳಿದ್ದರೂ, ಗುಂಪು ಗುಂಪಾಗಿ ಬಂದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ದೇಗುಲದ ಒಳಗೆ ಬಿಡುವಂತೆ ಆಗ್ರಹಿಸಿದರು.
ಇದಕ್ಕೆ ಪೊಲೀಸರು ಅಡ್ಡಿ ಪಡಿಸಿದಾಗ ಪ್ರತಿಭಟನೆಗೂ ಮುಂದಾದರು. ಕೆಲವರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಇದರಿಂದ ಪೊಲೀಸರು ಮತ್ತು ಕೈ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕಾರ್ಯಕರ್ತರನ್ನ ನಿಭಾಯಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೆಲವರು ಪೊಲೀಸರನ್ನೇ ತಳ್ಳಿಕೊಂಡು ಮುನ್ನಗ್ಗಲು ಯತ್ನಿಸಿದರು.

ಹಾಸನಾಂಬ ದೇವಾಲಯದ ಆವರಣದಲ್ಲಿ ಧರಣಿ ಕುಳಿತ ನಗರಸಭೆ ಅಧ್ಯಕ್ಷ ಮೋಹನ್

ನಗರಸಭೆ ಸದಸ್ಯರ ಪ್ರತಿಭಟನೆ:
ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಬೆನ್ನಲ್ಲೇ ಮತ್ತೊಂದೆಡೆ ನಗರಸಭೆ ಸದಸ್ಯರೂ ಪ್ರತಿಭಟನೆ ನಡೆಸಿದರು. ತಮ್ಮ ಒಳ ಬಿಡುತ್ತಿಲ್ಲ ಎಂದು ಆರೋಪಿಸಿ, ನಗರಸಭೆ ಅಧ್ಯಕ್ಷ ಆರ್.ಮೋಹನ್ ನೇತೃತ್ವದಲ್ಲಿ ದೇವಾಲಯದ ಆವರಣದಲ್ಲಿ ಸದಸ್ಯರು ಪ್ರತಿಭಟನೆಗೆ ಕುಳಿದರು. ನಗರಸಭಾ ಅಧ್ಯಕ್ಷರು, ಸದಸ್ಯರ ಜೊತೆಗೆ ನೂರಾರು ಭಕ್ತರು ಸಾಥ್ ನೀಡಿದರು. ನಂತರ ಪೊಲೀಸರನ್ನೇ ತಳ್ಳಿಕೊಂಡು
ಭಕ್ತರು ಒಳ ನುಗ್ಗಿದರು.  ಕಡೆಗೆ ಭಕ್ತರನ್ನು ನಿಯಂತ್ರಿಸಲಾಗದೇ ಪೊಲೀಸರು ಕೈಚೆಲ್ಲಿ ನಿಂತರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರನ್ನು ಮಾತ್ರ ಒಳಗೆ ಬಿಟ್ಟಿದ್ದೀರಿ, ಸಾರ್ವಜನಿಕರಿಗೇಕೆ ತಾರತಮ್ಯ ಎಂದು ಪ್ರಶ್ನಿಸಿದರು. ಈ ವೇಳೆ ಮುಖ್ಯದ್ವಾರದ ಮುಂದೆ ನೂರಾರು ಭಕ್ತರು ಜಮಾವಣೆಗೊಂಡರು. ಇದರಿಂದ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಸ್ಪಂದಿಸದ ಭಕ್ತಜನ:
ಈ ನಡುವೆ ಆರಂಭದ ದಿನ ದೇವಿಯ ಸಾರ್ವಜನಿಕ ದರ್ಶನ ಇಲ್ಲ ಎಂದು ಹೇಳಲಾಗಿತ್ತರೂ, ಸಾವಿರಾರು ಮಂದಿ ಪುರುಷಕರು, ಮಹಿಳೆಯರು ಜಮಾಯಿಸಿದ್ದರು. ಕೆಲವರು ದರ್ಶನಕ್ಕೆ ಬಿಡಲಿಲ್ಲ ಎಂದು ಘೋಷಣೆ ಸಹ ಕೂಗಿದರು. ಹೀಗಾಗಿ ಮೊದಲ ದಿನವೇ ಗದ್ದಲ, ಗೊಂದಲದ ವಾತಾವರಣ ನಿರ್ಮಾಣ ಆಗಿತ್ತು. ಅಲ್ಲದೆ ನೂಕು ನುಗ್ಗಲು ಉಂಟಾಗಿತ್ತು.

ಅಚ್ಚುಕಟ್ಟು ವ್ಯವಸ್ಥೆ:
ಈ ಬಾರಿಯ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಒಳ್ಳೇ ರೀತಿಯಲ್ಲಿ ಸಿದ್ಧತೆ ಮಾಡಲಾಗಿದೆ. ಭಕ್ತರು ಸರತಿ ಸಾಲಿನಲ್ಲಿ ನಿಲ್ಲುವ ಕಡೆ ಸುಸಜ್ಜಿತ ಬ್ಯಾರಿಕೇಡ್ ಜೊತೆಗೆ, ಅಲ್ಲಲ್ಲಿ ಕುಡಿಯವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಬಿಸಿಲಿನಲ್ಲಿ ಪಾದ ಸುಡದಂತೆ ನೆಲಹಾಸು ಹಾಕಲಾಗಿದೆ. ಎಲ್‌ಇಡಿ ಪರದೆ ಅಳವಡಿಸಿ ಮಹಾಭಾರತ ದೃಶ್ಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ದೇವಾಲಯಕ್ಕೆ ಹೂವಿನ ಅಲಂಕಾರ ಬಲು ಚಂದ ಎನಿಸಿದೆ. ದೇವಾಲಯಕ್ಕೆ ಬರುವ ಗಣ್ಯರ ಆಹ್ವಾನಕ್ಕೆ ಮೊದಲ ಬಾರಿಗೆ ಮಂಗಳವಾದ್ಯ, ಪೂರ್ಣಕುಂಭ ಜೊತೆಗೆ ಕೊಂಬು-ಕಹಳೆಯ ಮೆರುಗು ಸಹ ಇದೆ.

ಈ ನಡುವೆ ಹಾಸನಾಂಬೆ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ದರ್ಶನಕ್ಕೆ ಬರುವ ಭಕ್ತರಿಗೆ ಮನರಂಜನೆ ನೀಡಲು ಜಿಲ್ಲಾಡಳಿತ, ಕೆಎಸ್‌ಆರ್‌ಟಿಸಿ ಹಾಗೂ ಪ್ರವಾಸೋದ್ಯಮ ಇಲಾಖೆ ಆರಂಭಿಸಿರುವ ವಿಶೇಷ ಪ್ಯಾಕೇಜ್ ಪ್ರವಾಸ ಕಾರ್ಯಕ್ರಮಕ್ಕೆ ನಗರದ ಬಸ್ ನಿಲ್ದಾಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಚಾಲನೆ ನೀಡಿದರು. ಜಿಲ್ಲೆಯ ಒಟ್ಟು ಐದು ಕಡೆಗಳಿಗೆ ಪ್ಯಾಕೇಜ್ ಟೂರ್ ವ್ಯವಸ್ಥೆ ಮಾಡಲಾಗಿದೆ.