ಏ.18ರಂದು ಜಿಲ್ಲೆಯಲ್ಲಿ ಸಿಎಂ, ಡಿಸಿಎಂ ಮಿಂಚಿನ ಪ್ರಚಾರ; ಬಿಜೆಪಿಯವರನ್ನು ಭೇಟಿಯಾಗಿದ್ದು ಕೋಇನ್ಸಿಡೆನ್ಸ್; ಶ್ರೇಯಸ್ ಪಟೇಲ್

ಪ್ರತಿ ತಿಂಗಳು ಅಮಾವಾಸ್ಯೆ ಪೂಜೆಗೆ ದೊಡ್ಡಗದ್ದವಳ್ಳಿ ದೇವಸ್ಥಾನಕ್ಕೆ ಹೋಗುತ್ತೇನೆ ಅಲ್ಲಿ ಆಕಸ್ಮಿಕವಾಗಿ ಬಿಜೆಪಿಯವರು ಸಿಕ್ಕಿದರು.

ಹಾಸನ: ಏ.18 ರಂದು ಸಿಎಂ‌ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ ಚನ್ನರಾಯಪಟ್ಟಣ, ಹೊಳೆನರಸೀಪುರ, ಅರಕಲಗೂಡು ಸೇರಿದಂತೆ ಏಳೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ಪಟೇಲ್ ಹೇಳಿದರು.

ಜಿಲ್ಲಾ ವಕೀಲರ ಸಂಘದಲ್ಲಿ ಮತಯಾಚನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಹೋದ ಕಡೆಯಲ್ಲೆಲ್ಲಾ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಬದಲಾವಣೆ ತನ್ನಿ ಎಂದು ಎಲ್ಲರಲ್ಲಿ ಮನವಿ ಮಾಡಿದ್ದೇನೆ. ಒಮ್ಮೆ ನನಗೆ ಅವಕಾಶ ಕೊಡಿ ಎಂದು ಕೇಳಿಕೊಳ್ಳುತ್ತಿದ್ದೇನೆ‌ ಎಂದರು.

ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ, ನಾವು ಗೆಲ್ತೀವಿ. ಏ.15 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಡೂರಿಗೆ ಬರುತ್ತಾರೆ. ಒಂದೊಂದೆಡೆ ರೋಡ್ ಶೋ, ಮತ್ತೊಂದೆಡೆ ಬಹಿರಂಗ ಸಭೆ ಆಯೋಜನೆಯಾಗುತ್ತದೆ.

ಒಂದೇ ದಿನದಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ ಮುಗಿಸುತ್ತಾರೆ. ನಮಗೆ ಅವರು ಒಂದು ದಿನ ಚುನಾವಣೆ ಪ್ರಚಾರಕ್ಕೆ ಬಂದರೆ ಸಾಕು. ಇದಕ್ಕಿಂತಲೂ ಮುಂಚೆ ಹತ್ತಾರು ಬಾರಿ ಬಂದಿದ್ದಾರೆ ಎಂದರು.

ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಿದ ಸಂಬಂಧ ಪ್ರತಿಕ್ರಿಯಿಸಿದ ಅವರು ಪ್ರತಿ ತಿಂಗಳು ಅಮಾವಾಸ್ಯೆ ಪೂಜೆಗೆ ದೊಡ್ಡಗದ್ದವಳ್ಳಿ ದೇವಸ್ಥಾನಕ್ಕೆ ಹೋಗುತ್ತೇನೆ. ಅಲ್ಲಿ ಪಕ್ಷಾತೀತವಾಗಿ ಎರಡು, ಮೂರು ಸಾವಿರ ಜನ ಇದ್ದರು. ಅವತ್ತು ಬೆಳಿಗ್ಗೆ ಹೋದಾಗ ಕೋ ಇನ್ಸಿಡೆನ್ಸ್ ಅವರು ಬಂದರು. ನಾನು ಸಹಾಯ ಮಾಡಿ ಎಂದು ಮತಯಾಚಿಸಿದೆ. ಅವರು ನಗತ್ತಲೇ ಹೋದರು. ಗುಂಪಿನಲ್ಲಿದ್ದಾಗ ಒಂದು ಫೋಟೋ ತೆಗೆದುಕೊಂಡರು.

ಅದು ಬಿಟ್ಟರೆ ನಾನು ಹೋಗಿದ್ದು, ಅವರು ಅಲ್ಲಿ ಇದ್ದದ್ದು ನೂರಕ್ಕೆ ನೂರು ಪರ್ಸೆಂಟ್ ಆಕಸ್ಮಿಕ ಅಷ್ಟೇ. ನಾನು ಬಿಜೆಪಿಯ ಯಾರನ್ನೂ ಭೇಟಿ ಮಾಡಿಲ್ಲ, ಅದೆಲ್ಲಾ ಸುಳ್ಳು. ನಾನು ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಪಕ್ಷದವರನ್ನು ಭೇಟಿ ಮಾಡಿದ್ದೇನೆ. ಸುಮ್ಮನೆ ವೈಯಕ್ತಿಕವಾಗಿ ಯಾರ ಮೇಲೂ ಮಾತನಾಡಬಾರದು, ಆ ರೀತಿ ಏನೂ ಇಲ್ಲ ಎಂದರು.